ಕ್ಲೈವಿಯ

ಹಳದಿ ಇಲ್ಲವೆ ಹೊಳೆಯುವ ಕೆಂಪು ಬಣ್ಣದ ಹೂ ಬಿಡುವ ಮತ್ತು ಸದಾ ಹಸಿರಾಗಿರುವ ಎಲೆಗಳುಳ್ಳ ಲಶುನ ಸಸ್ಯ. ಇಮ್ಯಾಂಟೊ ಫಿಲಮ್ ಪರ್ಯಾಯ ನಾಮ. ಅಮರಿಲ್ಲಿಡೇಸೀ ಕುಟುಂಬಕ್ಕೆ ಸೇರಿದೆ. ದಕ್ಷಿಣ ಆಫ್ರಿಕದ ಮೂಲವಾಸಿಯಾದ ಇದು ಬೆಟ್ಟಗುಡ್ಡ ಮುಂತಾದ ಉನ್ನತ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತದೆ. ಚೆಲುವಿಗೆ ಹೆಸರಾಗಿರುವ ಇದನ್ನು ಅಂಚುಸಸ್ಯ ಇಲ್ಲವೆ ಕುಂಡ ಸಸ್ಯವಾಗಿ ಬೆಳೆಸುವುದು ವಾಡಿಕೆ. ಕ್ಲೈವಿಯ ಸುಮಾರು 3 ಪ್ರಭೇದಗಳನ್ನೊಳಗೊಂಡಿದೆ. ಎಲ್ಲವೂ ಬಹುವಾರ್ಷಿಕ ಮೂಲಿಕೆ ಸಸ್ಯಗಳು. ಸದಾ ಹಸಿರಾಗಿರುವ ಎಲೆಗಳು, ದಪ್ಪನೆಯ ಹಾಗೂ ರಸಭರಿತವಾದ ಬೇರುಗಳು ಛತ್ರಮಂಜರಿಗಳಲ್ಲಿ ಸಮಾವೇಶಗೊಂಡಿರುವ ಬೆಡಗಿನ ಬಣ್ಣದ ಹೂಗಳು ಈ ಗಿಡದ ಮುಖ್ಯ ಲಕ್ಷಣಗಳು. ಹೂಗಳು ಆಲಿಕೆಯಾಕಾರದವು. ಪ್ರತಿ ಹೂವಿನಲ್ಲಿ 6 ಪೆರಿಯಾಂತ್ ಹಾಲೆಗಳು, 6 ಕೇಸರಗಳು, ಮೂರು ಕಾರ್ಪೆಲುಗಳ ನೀಚ ಸ್ಥಾನದ ಅಂಡಾಶಯ ಇವೆ.ಫಲ ಬೆರಿಮಾದರಿಯದು.

ಕ್ಲೈವಿಯದ 3 ಪ್ರಭೇದಗಳಲ್ಲಿ ಹೆಚ್ಚು ಸುಂದರವಾದುದು ಮತ್ತು ಜನಪ್ರಿಯವಾದುದು ಮಿನಿಯೇಟ ಪ್ರಭೇದ. ಹೂಗಳ ಗಾತ್ರದಲ್ಲಿ ಮತ್ತು ಬಣ್ಣದ ಗಾಢತೆಯಲ್ಲಿ ವೈವಿಧ್ಯವನ್ನು ಪ್ರದರ್ಶಿಸುವ ಹಲವಾರು ಬಗೆಗಳು ಈ ಪ್ರಭೇದದಲ್ಲಿವೆ. 2' ಉದ್ದದ ಹಾಗೂ ಕತ್ತಿಯಾಕಾರದ 16-20 ಎಲೆಗಳು, ಪ್ರತಿ ಹೂಗೊಂಚಲಿನಲ್ಲಿ 16-20 ಕಡುಗೆಂಪು ಬಣ್ಣದ ಹೂಗಳು; ಮತ್ತು ಕೆಂಪು ಬಣ್ಣದ ಬೆರಿ ಫಲಗಳು ಈ ಪ್ರಭೇದದ ವಿಶೇಷ ಲಕ್ಷಣಗಳು.

ಕ್ಲೈವಿಯ ಜಾತಿಯ ಸಸ್ಯಗಳನ್ನು ಬೀಜ ಮತ್ತು ಚಿಕ್ಕ ಲಶುನಗಳಿಂದ ವೃದ್ಧಿಮಾಡಬಹುದು. ಬೀಜಗಳನ್ನು ಬಿತ್ತಿ, ಸಸಿಗಳನ್ನು ಪಡೆದು ಇವುಗಳನ್ನು ಬೇಕಾದ ಸ್ಥಳಗಳಲ್ಲಿ ನಾಟಿ ಮಾಡುವುದು ಉತ್ತಮ. ಲಶುನಗಳನ್ನು ನಾಟಿ ಮಾಡಲು ನವೆಂಬರ್-ಡಿಸೆಂಬರ್ ತಿಂಗಳು (ಗುಡ್ಡಗಾಡು ಪ್ರದೇಶಗಳಲ್ಲಿ ಫೆಬ್ರವರಿ-ಮಾರ್ಚ್ ತಿಂಗಳು) ಯೋಗ್ಯವಾದ ಕಾಲ. ಕ್ಲೈವಿಯ ಸಸ್ಯಗಳ ಬೇಸಾಯ ಯಶಸ್ವಿಯಾಗಬೇಕಾದರೆ ಭೂಮಿ ಫಲವತ್ತಾಗಿರಬೇಕು. ಎರಡು ವಾರಗಳಿಗೆ ಒಂದು ಸಾರಿ ದ್ರಾವಣ ಗೊಬ್ಬರ ಹಾಕುವುದರಿಂದ ಗಿಡಗಳು ಶೀಘ್ರವಾಗಿ ಬೆಳೆದು ದೊಡ್ಡ ಗಾತ್ರದ ಹೂಗಳನ್ನು ಕೊಡುವಂತಾಗುತ್ತವೆ. ಗಿಡಗಳು ಬಹುವಾರ್ಷಿಕವಾದ್ದರಿಂದ ವರ್ಷಂಪ್ರತಿ ಒಂದೇ ಕುಂಡದಲ್ಲಿ ಬೆಳೆಸಬಹುದು. ಆದರೆ ವರ್ಷಕ್ಕೊಮ್ಮೆ ಕುಂಡದ ಮೇಲ್ಭಾಗದ ಮಣ್ಣನ್ನು ತೆಗೆದುಹಾಕಿ ಹೊಸ ಮಣ್ಣನ್ನು ತುಂಬಬೇಕು.  					 						(ಡಿ.ಎಂ.)